May 21, 2026
Thursday, May 21, 2026
spot_img

ಪತ್ನಿಯ ಸಮಯಪ್ರಜ್ಞೆ, ಪೊಲೀಸರ ನೆರವು: ನೇಣಿಗೆ ಶರಣಾಗುತ್ತಿದ್ದ ವ್ಯಕ್ತಿಯ ಪ್ರಾಣ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಾರ್ವಜನಿಕರ ಆಪತ್ಬಾಂಧವನಾಗಿ ಕೆಲಸ ಮಾಡುತ್ತಿರುವ ನಮ್ಮ ಖಾಕಿ ಪಡೆ ಮತ್ತೊಮ್ಮೆ ಮಾನವೀಯತೆ ಮೆರೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ನಾಗರಭಾವಿಯ ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ ಕೊನೆ ಕ್ಷಣದಲ್ಲಿ ರಕ್ಷಿಸಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿಯಲ್ಲಿ ವಾಸಿಸುವ ಮಹಿಳೆಯೊಬ್ಬರು ಸೋಮವಾರ ಸಂಜೆ 5.30 ಕ್ಕೆ ‘ನಮ್ಮ 112’ ಗೆ ಕರೆ ಮಾಡಿ, ದಂಪತಿ ನಡುವಿನ ಕೌಟುಂಬಿಕ ಕಲಹದಿಂದ ಬೇಸತ್ತ ತನ್ನ ಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ತಕ್ಷಣವೇ ‘ನಮ್ಮ 112’ ಸಿಬ್ಬಂದಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಹೊಯ್ಸಳ-85 ರ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಅಲರ್ಟ್ ಮಾಡಿದ್ದಾರೆ. ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕೆಂಪರಾಜು ಮತ್ತು ಕಾನ್‌ಸ್ಟೆಬಲ್ ಹಸನ್‌ಬಾಷಾ ಕೇವಲ 16 ನಿಮಿಷಗಳಲ್ಲಿ ಆ ವ್ಯಕ್ತಿಯ ಮನೆಗೆ ತಲುಪಿ, ಕೋಣೆಯ ಬಾಗಿಲನ್ನು ಮುರಿದು ನೇಣು ಬಿಗಿದ ಸ್ಥಿತಿಯಲ್ಲಿದ್ದ ಆತನನ್ನು ರಕ್ಷಿಸಿದ್ದಾರೆ.

ಬಳಿಕ ಪೊಲೀಸರು ಆ ವ್ಯಕ್ತಿಗೆ ಧೈರ್ಯ ತುಂಬಿ ಕೌನ್ಸೆಲಿಂಗ್ ನಡೆಸುವ ಮೂಲಕ ಮಾನಸಿಕ ಮತ್ತು ಭಾವುಕ ಬೆಂಬಲವನ್ನು ನೀಡಿದ್ದಾರೆ. ಅಲ್ಲದೆ ಆತನ ಕುಟುಂಬದವರೊಂದಿಗೂ ಮಾತನಾಡಿ, ಇಂತಹ ಮಾನಸಿಕ ಒತ್ತಡ ಹಾಗೂ ಕೌಟುಂಬಿಕ ಕಲಹಗಳನ್ನು ಸೂಕ್ಷ್ಮವಾಗಿ ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !